ದಾಹರ್
 	ಸಿಂಧೂ ಪ್ರದೇಶವನ್ನಾಳುತ್ತಿದ್ದ (ಸು. 700/712) ಒಬ್ಬ ರಾಜ. ದಾಹಿರ್ ಎಂದೂ ಇವನನ್ನು ಕರೆಯಲಾಗಿದೆ. ಅಲ್ಲಿ ಹಿಂದೆ ಇದ್ದ ರಾಜನ ಕೈಕೆಳಗೆ ಅಧಿಕಾರಿಯಾಗಿದ್ದ ಬ್ರಾಹ್ಮಣನಾದ ಚಾಚನೆಂಬಾತ 640ರಲ್ಲಿ ತನ್ನ ಒಡೆಯನನ್ನು ಅಧಿಕಾರದಿಂದ ತಳ್ಳಿ ತಾನೇ ರಾಜನಾದ. ಅವನ ಅನಂತರ ಅವನ ಸೋದರನಾದ ಚಂದರ್ ಪಟ್ಟವೇರಿದ. ಚಾಚನ ಮಕ್ಕಳಾದ ದಾಹರ್ ಮತ್ತು ದಹರ್ಸಿಯ ಇವರು ಚಂದರನ ಅನಂತರ ರಾಜ್ಯವನ್ನು ತಮ್ಮಲ್ಲಿ ಹಂಚಿಕೊಂಡರು. ದಾಹರ್ 700ರಲ್ಲಿ ಪಟ್ಟವೇರಿದಾಗ ಅವನ ರಾಜಧಾನಿ ಆಲೋರ್ ಆಗಿತ್ತು. ಇವನ ಆಳ್ವಿಕೆಯ ಕಾಲಕ್ಕೂ ಹಿಂದಿನಿಂದಲೇ ಅರಬ್ಬರೂ ಈ ಭಾಗದಲ್ಲಿ ಅನೇಕ ಭಾರಿ ದಾಳಿ ಮಾಡುತ್ತಿದ್ದರು. ಆದರೆ ಅವರು ಈ ದಾಳಿಗಳಿಂದ ಭಾರತದಲ್ಲಿ ನೆಲೆ ಪಡೆಯಲಾಗಲಿಲ್ಲ. ಅರಬ್ ಸಾಮ್ರಾಜ್ಯದಲ್ಲಿ ಇರಾಕಿನ ಮಾಂಡಲಿಕನಾಗಿದ್ದ ಹಜ್ಜಾಜ್ ಸಿಂಧಿನ ಮೇಲೆ ದಂಡೆತ್ತಿ ಬರಲು ಉತ್ಸುಕನಾಗಿದ್ದ. 108ರಲ್ಲಿ ತಮ್ಮ ಒಂದೇ ಹಡಗನನ್ನು ಸಿಂಧಿನ ಕರಾವಳಿಯ ಕಡಲ್ಗಳರು ವಶಪಡಿಸಿಕೊಂಡರೆಂಬ ನೆಪದಿಂದ ಉಬೇದುಲ್ಲ ಎಂಬ ದಂಡನಾಯಕನ ನೇತೃತ್ವದಲ್ಲಿ ಸೈನ್ಯ ಕಳುಹಿಸಿದ. ದಾಹರ ಅವನನ್ನು ಸೋಲಿಸಿ ಮರಳಿಸಿದ. ಮುಂದೆ ಬುಡೈಲ್ ಎಂಬ ಸೇನಾನಿಯ ದಂಡ ಯಾತ್ರೆಯೂ ವಿಫಲವಾಯಿತು. ಬುಡೈಲ್ ಹತನಾದ. ತನ್ನ ಅಳಿಯನಾದ ಮಹಮ್ಮದ್ ಬಿನ್ ಕಾಸಿಮನ ನಾಯಕತ್ವದಲ್ಲಿ ಹಜ್ಜಾಜ್ ಭಾರಿ ದಂಡೊಂದನ್ನು ಕಳುಹಿಸಿದ. ಕಾಸಿಮ ದೇಬಲ್ ಬಂದರನ್ನು ಆಕ್ರಮಿಸಿಕೊಂಡು ನೆರೂನ್‍ಗೆ ಬಂದಾಗ ಅಲ್ಲಿಯ ಬೌದ್ಧರು ಅವನಿಗೆ ನೆರವಾದರು. ಮೊಕಾ ಎಂಬ ಸ್ಥಳದಲ್ಲಿದ್ದ ದಾಹರನ ಮಾಂಡಳಿಕನೂ ಕಾಸಿಮನಿಗೆ ನೆರವು ನೀಡಿದ. ರಾವುರ್‍ನಲ್ಲಿ ನಡೆದ ಯುದ್ಧದಲ್ಲಿ ದಾಹರನದೇ ಮೇಲುಗೈ ಆಗಿತ್ತು. ಆದರೆ ಆನೆಯ ಮೇಲೆ ಕುಳಿತು ಸೇನೆಯನ್ನು ನಿರ್ದೇಶಿಸುತ್ತಿದ್ದ ಅವನ ಎದೆಗೆ ಬಾಣವೊಂದು ತಗುಲಿ ಆತ ಸತ್ತ. ರಾವುರ್ ಕೋಟೆಯಲ್ಲಿ ದಾಹರನ ರಾಣಿ ಭಾರಿ ಪ್ರತಿಭಟನೆ ವ್ಯಕ್ತಪಡಿಸಿ, ಕಡೆಗೆ ತನ್ನ ಅನುಯಾಯಿಗಳ ಜೊತೆಗೆ ಆತ್ಮಾಹುತಿ ಮಾಡಿಕೊಂಡಳು. ದಾಹರನ ಮಗ ಜಯಸಿಂಹ ಆರುತಿಂಗಳುಗಳ ಕಾಲ ಬ್ರಾಹ್ಮನಾಬಾದಿನಿಂದ ಪ್ರಬಲವಾಗಿ ಪ್ರತಿಭಟಿಸಿದ. ಮುಂದೆ ಅದು ಕೈತಪ್ಪಿತು. ಈ ವಿಜಯದ ಅನಂತರ ಕಾಸಿಮ ಸ್ವದೇಶಕ್ಕೆ ಹಿಂದಿರುಗಿದ. ಬ್ರಾಹ್ಮನಾಬಾದನ್ನು ಜಯಸಿಂಹ ಮತ್ತೆ ಗೆದ್ದುಕೊಂಡ. ಮುಂದೆ ಆತ ಕಲೀಫನ ಪರಮಾಧಿಕಾರವನ್ನು ಒಪ್ಪಿಕೊಂಡರೂ ಬೇಗ ಬಂಡೆದ್ದು ಕೊನೆಗೆ ಅರಬ್ಬರ ಬಂಧಿಯಾದ. ದಾಹರನ ವಂಶದ ಆಡಳಿತ ಹೀಗೆ ಕೊನೆಗೊಂಡಿತು. ದಾಹರ್ ಸಮರ್ಥ ರಾಜನಾಗಿದ್ದರು ಅವನ ಬಳಿ ಬಲವಾದ ನೌಕಾ ಸೈನ್ಯ ಇರದಿದ್ದುದೂ ಕರಾವಳಿ ಪ್ರದೇಶಗಳ ಮೇಲೆ ಆತನಿಗೆ ಹಿಡಿತ ಇಲ್ಲದಿದ್ದುದೂ ಆತನ ಸೋಲಿಗೆ ಮುಖ್ಯ ಕಾರಣಗಳು.
(ಎಸ್.ಎನ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ